ಪಶ್ಚಿಮ ವರ್ಜಿನಿಯ -
ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಂದು ರಾಜ್ಯ. ವಿಸ್ತೀರ್ಣದಲ್ಲಿ ಸಂಯುಕ್ತ ಸಂಸ್ಥಾನಗಳ 41ನೆಯ ಮತ್ತು ಜನಸಂಖ್ಯೆಯಲ್ಲಿ 34ನೆಯ ರಾಜ್ಯ. ಉ.ಅ. 370 12-40038 ಹಾಗೂ ಪ.ರೇ 77040-820 40 ನಡುವೆ ಹಬ್ಬಿರುವ ಈ ರಾಜ್ಯದ ಉತ್ತರದಲ್ಲಿ ಮೇರಿಲ್ಯಾಂಡ್ ಮತ್ತು ಪೆನ್ಸಿಲ್ವೇನಿಯ, ದಕ್ಷಿಣ ಮತ್ತು ಪೂರ್ವದಲ್ಲಿ ವರ್ಜಿನಿಯ, ಪಶ್ಚಿಮದಲ್ಲಿ ಕೆಂಟಕಿ ಮತ್ತು ಒಹೈಯೋ ಇವೆ. ಉತ್ತರದಿಂದ ದಕ್ಷಿಣಕ್ಕೆ ರಾಜ್ಯದ ಉದ್ದ ಸುಮಾರು 384 ಕಿಮೀ. ಪೂರ್ವ ಪಶ್ಚಿಮವಾಗಿ ಅಗಲ 256 ಕಿಮೀ. ಒಹೈಯೋ ನದಿ ಈ ರಾಜ್ಯದ ಪಶ್ಚಿಮ ಗಡಿ. ಅದರ ಅನೇಕ ಉಪನದಿಗಳು ರಾಜ್ಯದೊಳಗಿಂದ ಹರಿಯುತ್ತವೆ. ಪೊಟೋಮಕ್ ನದಿ ಉತ್ತರದ ಗಡಿಯ ಒಂದು ಭಾಗ. ಆಗ್ನೇಯ ಗಡಿಗುಂಟ ಆಲೆಗಾನೀ ಮತ್ತು ಶನಂಡೋವ ಪರ್ವತಗಳಿವೆ. ರಾಜ್ಯದ ವಿಸ್ತೀರ್ಣ 62,759 ಚ,ಕಿಮೀ. ಜನಸಂಖ್ಯೆ 1,8,01,625 (1990). ರಾಜಧಾನಿ ಚಾಲ್ರ್ಸ್‍ಟನ್.

ಭೌತಲಕ್ಷಣ : ಪಶ್ಚಿಮ ವರ್ಜಿನಿಯದ ನೆಲ ವಿಪರೀತ ಏರುತಗ್ಗುಗಳಿಂದ ಕೂಡಿದೆ. ಇಡೀ ರಾಜ್ಯವೇ ಆಪಲೇಚಿಯನ್ ಪರ್ವತವ್ಯೂಹದ ಒಂದು ಭಾಗವಾಗಿರುವುದರಿಂದ ಪರ್ವತಮಯವಾಗಿದೆ. ರಾಜ್ಯದ ಸರಾಸರಿ ಎತ್ತರ ಸಮುದ್ರ ಪಾತಳಿಯಿಂದ 457 ಮೀ. ಮಟ್ಟಸವಾದ ನೆಲ ತೀರ ಕಡಿಮೆ. ಅದು ಕಿರಿದಾಗಿದೆ. ತೀರ ತಗ್ಗಿನ ಪ್ರದೇಶಗಳು ಒಹೈಯೋ ಮತ್ತು ಪೊಟೋಮಕ್ ನದಿಗಳ ಗುಂಟ ಇವೆ.

ಆಪಲೇಚಿಯನ್ ಪರ್ವತಗಳು ಈಶಾನ್ಯದಿಂದ ನೈಋತ್ಯಕ್ಕೆ ಹಬ್ಬಿವೆ. ತೀರ ಅಗಲವಾದ ಕಣಿವೆ ಪ್ರದೇಶ ಇರುವುದು ಒಹೈಯೋ ನದಿಯ ಸಮೀಪದಲ್ಲಿ ಮತ್ತು ಆಲೆಗಾನೀ ಹಾಗೂ ಬ್ಲ್ಯೂರಿಜ್ ಶ್ರೇಣಿಗಳ ನಡುವೆ. ರಾಜ್ಯದ ಉಳಿದ ಭಾಗಗಳು ಕಡಿದಾದ ಇಳುಕಲುಗಳಿರುವ ಕಿರಿಯಗಲದ ಕಣಿವೆಗಳಿಂದಲೂ ಚಪ್ಪಟೆ ನೆತ್ತಿಗಳಿರುವ ಎತ್ತರ ಪ್ರದೇಶಗಳಿಂದಲೂ ತುಂಬಿವೆ. ವಿಶಾಲ ಬಯಲುಗಳು ರಾಜ್ಯದಲ್ಲಿ ತೀರ ಕಡಿಮೆ. ಪರ್ವತಗಳಿಂದಾಗಿರುವ ಮುಖ್ಯ ಸ್ವಾಭಾವಿಕ ಪ್ರದೇಶಗಳು ಇವು: 1. ಆಪಲೇಚಿಯನ್ ಪರ್ವತ ಪಂಕ್ತಿ ಮತ್ತು ಕಣಿವೆಗಳ ಪ್ರದೇಶ: 2. ಆಪಲೇಚಿಯನ್ ತಪ್ಪಲು ಭೂಮಿ, 3. ಬ್ಲ್ಯೂರಿಜ್. ಇವುಗಳಲ್ಲಿ ಮೊದಲನೆಯದು ರಾಜ್ಯದ ಪೂರ್ವಭಾಗದಲ್ಲಿದೆ. ಇಲ್ಲಿಯ ಪರ್ವತಗಳು ಭೂಮಿಯ ಹೊರಪದರ ಸಂಕುಚಿತವಾಗತೊಡಗಿದಾಗ ಮೇಲಕ್ಕೆದ್ದ ಬಿರುಸು ಬಂಡೆಗಳ ಬೃಹತ್ ಮಡಿಕೆಗಳು. ಪೆಂಡ್ಲ್‍ಟನ್ ಕೌಂಟಿಯಲ್ಲಿರುವ ಸ್ಪ್ರೂಸ್‍ನಾಬ್(1.417 ಮೀ.) ರಾಜ್ಯದ ಅತ್ಯುನ್ನತ ಶಿಖರ. ಪೂರ್ವಕ್ಕೆ ಹರಿದು ಅಟ್ಲಾಂಟಿಕ್ ಸಾಗರವನ್ನೂ ಪಶ್ಚಿಮಕ್ಕೆ ಹರಿದು ಒಹೈಯೋ ನದಿಯನ್ನೂ ಸೇರುವ ಅನೇಕ ನದಿಗಳು ಇಲ್ಲಿ ಹುಟ್ಟುತ್ತವೆ. ಪರ್ವತಗಳ ಕಡಿದಾದ ಮಗ್ಗಲುಗಳಲ್ಲಿ ಕಾಡುಗಳಿವೆ. ದರಿಗಳ ನಡುವಿನ ಕೊಳ್ಳಗಳಲ್ಲಿ ಝರಿಗಳು ಹರಿಯುತ್ತವೆ. ಈ ಪ್ರದೇಶದ ಪಶ್ಚಿಮಕ್ಕಿರುವುದು ಆಪಲೇಚಿಯನ್ ತಪ್ಪಲು. ಇದು ಕೂಡ ಭೂಮಿಯ ಹೊರಪದರ ಸಂಕುಚಿತವಾಗತೊಡಗಿದಾಗ ಮೇಲಕ್ಕೆದ್ದ ಭೂಪ್ರದೇಶ. ಇಲ್ಲಿ ಹರಿಯುವ ಅನೇಕ ಜಲಪ್ರವಾಹಗಳು ಹಲವಾರು ಕೊಳ್ಳಗಳನ್ನೂ ದುಂಡನೆಯ ಗುಡ್ಡಗಳನ್ನೂ ನಿರ್ಮಿಸಿವೆ. ಹೆಚ್ಚುಕಡಿಮೆ ಎಲ್ಲ ಮುಖ್ಯ ನಗರಗಳೂ ಬಹುಪಾಲು ಕಲ್ಲಿದ್ದಲು ಗಣಿಗಳೂ ಇಲ್ಲಿವೆ. ತಪ್ಪಲಿನ ಈಶಾನ್ಯ ಭಾಗದಲ್ಲಿ 1,220 ಮೀ ಗಳಿಗೂ ಎತ್ತರವಾಗಿರುವ 40ಕ್ಕೂ ಹೆಚ್ಚು ಶಿಖರಗಳಿವೆ. ಆಳವಾದ ನದಿಗಳು ಈ ಪರ್ವತ ಪ್ರದೇಶವನ್ನು ಅಡ್ಡವಾಗಿ ಕೊರೆದಿವೆ. ಒಹೈಯೋ ನದಿಗೂ ಪೆನ್ಸಿಲ್ವೇನಿಯ ರಾಜ್ಯದ ಗಡಿಗೂ ನಡುವೆ ಇರುವ ಕಿರಿಯಗಲದ ಪ್ರದೇಶ ಗುಡ್ಡಗಾಡು. ಅಲ್ಲಿ ಕಲ್ಲಿದ್ದಲು, ಉಪ್ಪು, ಪೆಟ್ರೋಲಿಯಮ್ ಮತ್ತು ಸ್ವಾಭಾವಿಕ ಅನಿಲಗಳ ನಿಕ್ಷೇಪಗಳಿವೆ. ಮೂರನೆಯದಾದ ಬ್ಲ್ಯೂರಿಜ್ ಆಪಲೇಚಿಯನ್ ಪರ್ವತವ್ಯೂಹದ ಭಾಗವಾಗಿರುವ ಒಂದು ಪರ್ವತಶ್ರೇಣಿ. ಜೆಫರ್‍ಸನ್ ಕೌಂಟಿಯಲ್ಲಿರುವ ಈ ಪ್ರದೇಶ ರಾಜ್ಯದ ತೀರ ಪೂರ್ವದ ತುದಿಯಲ್ಲಿವೆ. ಇಲ್ಲಿರುವ ದುಂಡನೆಯ ಪರ್ವತಗಳ ಸುತ್ತ ಆಳವಾದ ಮತ್ತು ಫಲವತ್ತಾದ ನದೀಕಣಿವೆಗಳಿವೆ. ಇಲ್ಲಿಯ ಹಳ್ಳಗಳು ಈಶಾನ್ಯದತ್ತ ಹರಿದು ಪೊಟೋಮಕ್ ನದಿಯನ್ನು ಸೇರುತ್ತವೆ. ಪರ್ವತಗಳ ಇಳಿಜಾರು ಪ್ರದೇಶ ಮತ್ತು ಕಣಿವೆಗಳಲ್ಲಿ ಸೇಬು ಮತ್ತು ಪೀಚ್ ತೋಟಗಳಿವೆ.

ಪಶ್ಚಿಮ ವರ್ಜಿನಿಯದ ಹೆಚ್ಚು ನದಿಗಳು ಆಪಲೇಚಿಯನ್ ಪರ್ವತ ಪಂಕ್ತಿ ಮತ್ತು ಕಣಿವೆಗಳಲ್ಲಿ ಚಿಕ್ಕ ಝರಿಗಳಂತೆ ಪ್ರಾರಂಭವಾಗುತ್ತವೆ. ಅವು ಪರ್ವತಗಳ ಮಗ್ಗಲುಗಳಲ್ಲಿ ಧುಮುಕುವಾಗ ಅನೇಕ ಜಲಪಾತಗಳನ್ನೂ ಆಳವಾದ ಕಣಿವೆಗಳನ್ನೂ ನಿರ್ಮಿಸಿ ಒಹೈಯೋ ಅಥವಾ ಪೊಟೋಮಕ್ ನದಿಗಳನ್ನು ಸೇರುತ್ತವೆ. ಅಗಲವಾಗಿರುವ ಒಹೈಯೋ ನದಿಯಿಂದ ಮಿಸಿಸಿಪಿ ನದಿಗೂ ಮೆಕ್ಸಿಕೋ ಕೊಲ್ಲಿಗೂ ಸುಲಭವಾದ ಸಂಚಾರಸೌಲಭ್ಯ ಒದಗಿದೆ. ರಾಜ್ಯದಲ್ಲಿ ಒಹೈಯೋ ನದಿಯ ಅತ್ಯಂತ ದೊಡ್ಡ ಉಪನದಿ ಕನಾವ. ಮನಾಂಗಹೀಲ ಮತ್ತು ಅದರ ಉಪನದಿಗಳು ಆಪಲೇಜಿಯನ್ ತಪ್ಪಲಿನ ಈಶಾನ್ಯ ಭಾಗದಲ್ಲಿ ಹರಿಯುತ್ತವೆ. ಪೊಟೋಮಕ್ ಪೂರ್ವದ ತುದಿಯಲ್ಲಿ ಹರಿಯುವ ಮುಖ್ಯ ನದಿ. ರಾಜ್ಯದಲ್ಲಿ ದೊಡ್ಡ ಸರೋವರಗಳಿಲ್ಲ. ಆದರೆ ಅನೇಕ ಝರಿಗಳಿಗೆ ಒಡ್ಡುಗಳನ್ನು ಹಾಕಿ, ವಿದ್ಯುತ್ತಿನ ತಯಾರಿಕೆ, ಮೀನುಗಾರಿಕೆ ಮತ್ತು ಮನೋರಂಜನೆಗಾಗಿ ಕೃತಕ ಜಲಾಶಯಗಳನ್ನು ನಿರ್ಮಿಸಲಾಗಿದೆ.

ಮಣ್ಣು : ಒಹೈಯೋ ನದಿಯ ಉದ್ದಕ್ಕೂ ಇರುವ ಜೇಡಿ ಮಣ್ಣು ಕುಂಭ ಕೈಗಾರಿಕೆಗೆ ಸಹಾಯಕವಾಗಿದೆ. ಪೂರ್ವದಲ್ಲಿರುವ ಸುಣ್ಣಕಲ್ಲಿನ ಮಣ್ಣು ಹುಲ್ಲುಗಾವಲು ಮತ್ತು ಹಣ್ಣಿನ ತೋಟಗಳಿಗೆ ಯೋಗ್ಯವಾಗಿದೆ. ರಾಜ್ಯದ ಅಧಿಕ ಭಾಗದಲ್ಲಿ ಕಂಡುಬರುವ ಮರಳುಗಲ್ಲಿನಿಂದ ಉತ್ಪತ್ತಿಯಾದ ಆಮ್ಲೀಯಮಣ್ಣು ಕೃಷಿಗೆ ಉಪಯುಕ್ತವಾದ್ದು.

ವಾಯುಗುಣ : ರಾಜ್ಯದ್ದು ಹಿತಕರವೂ ಆರೋಗ್ಯಕರವೂ ಆದ ವಾಯುಗುಣ. ಜನವರಿ ಅತ್ಯಂತ ಚಳಿಯ ತಿಂಗಳು. ಆಗ ರಾಜ್ಯದ ಸರಾಸರಿ ಉಷ್ಣತೆ 10 ಸೆ. ಜುಲೈ ಅತ್ಯಂತ ಸೆಕೆಯ ತಿಂಗಳು. ಆಗಿನ ಸರಾಸರಿ ಉಷ್ಣತೆ 230 ಸೆ.ಪರ್ವತ ಪ್ರದೇಶಗಳಲ್ಲಿ 1,524 ಮಿ.ಮೀ.ಗಳಿಂದ ಹಿಡಿದು ಅತ್ಯಂತ ಪೂರ್ವದಲ್ಲಿ 889 ಮಿ.ಮೀ.ವರೆಗೆ ಮಳೆಯಾಗುತ್ತದೆ.

ಸಸ್ಯಪ್ರಾಣಿ ಜೀವನ : ರಾಜ್ಯದ ಮುಕ್ಕಾಲು ಭಾಗವನ್ನು ಅರಣ್ಯಗಳು ಆವರಿಸಿವೆ. ತಪ್ಪಲಿನ ಕಾಡುಗಳಲ್ಲಿ ಕೆಂಪು ಮತ್ತು ಬಿಳಿ ಓಕ್, ಹಳದಿ ಪಾಪ್ಲರ್, ಕೆಂಪು ಮೇಪ್‍ಲ್, ಹಿಕರಿ ಬೀಚ್, ಬಾಸ್‍ವುಡ್, ಬ್ಲ್ಯಾಕ್‍ಬರಿ, ಹಳದಿ ಬರ್ಚ್ ಮೊದಲಾದ ಗಟ್ಟಿ ಮರಗಳು ವಿಶೇಷವಾಗಿವೆ. ವಿವಿಧ ಜಾತಿಯ ಪೈನ್, ಸೂಸ್, ಹೆಮ್ಲ್‍ಲಾಕ್ ಮೊದಲಾದ ಮೆದು ಮರಗಳು ಉತ್ಪನ್ನ ಪರ್ವತಗಳ ಇಳಿಜಾರುಗಳಲ್ಲಿ, ಮತ್ತು ಆಳವಾದ ಕಮರಿಗಳಲ್ಲಿ ಬೆಳೆಯುತ್ತವೆ. ರಾಜ್ಯದ ಪೂರ್ವಭಾಗದಲ್ಲಿ ಓಕ್ ಮತ್ತು ಪೈನ್ ಹೆಚ್ಚಾಗಿವೆ. 

ಮೊಲ, ಅಳಿಲು, ಕಂದು ನರಿ, ಒಪಾಸಮ್, ಸ್ಕಂಕ್, ರ್ಯಾಕೂನ್, ಮತ್ತು ಹಂದಿ ಇಲ್ಲಿ ಸಾಮಾನ್ಯ. ದೂರದೂರದ ಹಾಗೂ ಸಂರಕ್ಷಿತ ಪ್ರದೇಶಗಳಲ್ಲಿ ಬಿಳಿಯ ಬಾಲದ ಚಿಗರೆಯೂ ಸಂಪರ್ಕರಹಿತ ಉನ್ನತ ಪ್ರದೇಶಗಳಲ್ಲಿ ಕಪ್ಪು ಕರಡಿಗಳೂ ಇವೆ.

ಇತಿಹಾಸ : ಅಮೆರಿಕನ್ ಅಂತರ್ಯುದ್ಧದ ಕಾಲದವರೆಗೆ ಇಂದಿನ ಪಶ್ಚಿಮ ವರ್ಜಿನಿಯದ ಪ್ರದೇಶ ವರ್ಜಿನಿಯ ರಾಜ್ಯದಲ್ಲಿ ಸೇರಿತ್ತು. ಈ ಪ್ರದೇಶದ ಮೂಲ ಇಂಡಿಯನ್ ನಿವಾಸಿಗಳು ಕಟ್ಟಿದ ನೂರಾರು ದಿಬ್ಬಗಳನ್ನು ಇಂದಿಗೂ ಕೆಲವು ನದೀಕಣಿವೆಗಳಲ್ಲಿ ಕಾಣಬಹುದು. ಇವರು 1670ರ ದಶಕದಲ್ಲಿ ಬಿಳಿಯರು ಬರುವುದಕ್ಕೆ ಬಹುಕಾಲ ಮುಂಚೆಯೇ ನಿರ್ನಾಮವಾಗಿದ್ದರು. ಬಿಳಿಯ ಪರಿಶೋಧಕರ ಪ್ರವೇಶದ ಕಾಲಕ್ಕೆ ಚೆರೋಕಿ, ಕಾನಾಯ್, ಡೆಲವೇರ್, ಶಾನ್, ಸುಸ್ಕಹಾನ, ಮೊದಲಾದ ಇಂಡಿಯನ್ ಜನರು ಈ ಪ್ರದೇಶವನ್ನು ಬೇಟೆಗಾಗಿ ಬಳಸುತ್ತಿದ್ದರು. ನೆಲ ಒರಟಾಗಿದ್ದದರಿಂದ ಅವರು ಇಲ್ಲಿ ಶಾಶ್ವತವಾಗಿ ನೆಲೆಸದೆ ಬೇಸಗೆಯಲ್ಲಿ ಬೇಟೆಯಾಡುತ್ತ, ಇಲ್ಲವೇ ಉಪ್ಪು ನೀರಿನ ಮಡುಗಳಿಂದ ಉಪ್ಪನ್ನು ಶೇಖರಿಸುತ್ತ, ಉಳಿದು ಚಳಿಗಾಲ ಬಂದಾಗ ಪೂರ್ವ ಮತ್ತು ಉತ್ತರ ಪ್ರದೇಶಗಳಿಗೆ ಹಿಂದಿರುಗುತ್ತಿದ್ದರು. ಬೇಟೆಯ ಪ್ರದೇಶಗಳ ಮತ್ತು ಉಪ್ಪುನೀರಿನ ಮಡುಗಳ ಸ್ವಾಮ್ಯಕ್ಕಾಗಿ ಅವರಲ್ಲಿ ಹೊಡೆದಾಟಗಳಾಗುತ್ತಿದ್ದುವು. 1670ರಲ್ಲಿ ಜರ್ಮನ್ ಪರಿಶೋಧಕ ಜಾನ್ ಲೆಡರರ್ ಕೆಲವು ಅನುಯಾಯಿಗಳೊಂದಿಗೆ ಬ್ಲ್ಯೂರಿಜ್ ಪರ್ವತಗಳ ಶಿಖರವನ್ನು ಮುಟ್ಟಿದ. ಅವರೇ ಪಶ್ಚಿಮ ವರ್ಜಿನಿಯ ಪ್ರದೇಶವನ್ನು ಪ್ರವೇಶಿಸಿದ ಬಿಳಿಯರಲ್ಲಿ ಮೊದಲಿಗರಾಗಿರಬೇಕು. 1671ರಲ್ಲಿ ತಾಮಸ್ ಬಾಟ್ಸ್ ಮತ್ತು ರಾಬರ್ಟ್ ಫಲಾಮ್ ಎಂಬವರು ತುಪ್ಪಳನ್ನು ಅರಸುತ್ತ ಈ ಪ್ರದೇಶಕ್ಕೆ ಬಂದರು. ಮುಂದಿನ ಕೆಲವು ವರ್ಷಗಳಲ್ಲಿ ಅನೇಕ ಪರಿಶೋಧಕರ ತಂಡಗಳು ಇಲ್ಲಿಗೆ ಬಂದುವು. ಡೆಲವೇರಿನ ಮಾರ್ಗನ್ ಎಂಬಾತ ಇಲ್ಲಿ ಶಾಶ್ವತವಾಗಿ ನೆಲೆಸಿದ ಬಿಳಿಯರಲ್ಲಿ ಮೊದಲಿಗ. 1730ರ ಅನಂತರ ವಿಶೇಷವಾಗಿ ಪೆನ್ಸಿಲ್‍ವೇನಿಯ ಮತ್ತು ಮೇರಿಲ್ಯಾಂಡ್ ಗಳಿಂದ ಅನೇಕ ನೆಲಸಿಗರು ಇಲ್ಲಿಗೆ ಬಂದರು. ಅವರ ಬಿಡಿಬಿಡಿಯಾಗಿದ್ದ ನೆಲಸುಗಳ ಮೇಲೆ ಇಂಡಿಯನರು ದಾಳಿಮಾಡುತ್ತಿದ್ದರು. 1775ರಲ್ಲಿ ಬಿಳಿಯರು ಇಂಡಿಯನರನ್ನು ನಿರ್ಣಾಯಕವಾಗಿ ಗೆದ್ದರು. ಅಮೆರಿಕನ್ ಕ್ರಾಂತಿಯ ಸಮಯದಲ್ಲಿ ಬ್ರಿಟಿಷರಿಂದ ಪ್ರೇರಿತರಾದ ಇಂಡಿಯನರು ಬಿಳಿಯರ ನೆಲೆಸಿನ ಮೇಲೆ ತೀವ್ರವಾಗಿ ದಾಳಿಮಾಡಿದರು. ಕ್ರಮೇಣ ಇಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಿತು. 1852ರಲ್ಲಿ ಬಾಲ್ಟಿಮೋರ್ ಮತ್ತು ಒಹೈಯೋ ರೈಲು ಮಾರ್ಗ ಹೀಲಿಂಗನ್ನು ಮುಟ್ಟಿತು. ಈ ನಡುವೆ ಈ ಪ್ರದೇಶದ ಜನರು ಪೂರ್ವದವರ ಪಕ್ಷಪಾತಮನೋಭಾವದಿಂದ ಅಸಂತುಷ್ಟರಾಗಿದ್ದರು. ವಿವಿಧ ಪ್ರದೇಶಗಳಿಂದ ಬಂದು ನೆಲೆಸಿದ್ದ ಅವರು ಒಂದು ಅಸಮಂಜಸ ಮಿಶ್ರಣದಂತಿದ್ದರು. ಅವರ ಮತ್ತು ಪೂರ್ವದ ಹೆಚ್ಚು ಸುಸಂಸ್ಕøತ ಹಾಗೂ ಶ್ರೀಮಂತವರ್ಗದವರ ಆಚಾರ ವಿಚಾರ ಸಂಸ್ಕøತಿಗಳಲ್ಲಿ ಸ್ವಾಭಾವಿಕವಾದ ವ್ಯತ್ಯಾಸವಿತ್ತು. ಗುಲಾಮಗಿರಿ ಅವರಿಗೆ ಬೇಡವಾಗಿತ್ತು. ಕಂದಾಯದಲ್ಲಿ ಅಸಮತೆ, ಶಾಸನ ಸಭೆಯಲ್ಲಿ ಕಡಿಮೆ ಪ್ರಾತಿನಿಧ್ಯ ಮುಂತಾದವುಗಳಿಂದ ಅವರು ಕ್ಷೋಭೆಗೊಂಡಿದ್ದರು. ಅಂತರ್ಯುದ್ಧದ ಕಾಲದಲ್ಲಿ ಪಶ್ಚಿಮ ವರ್ಜಿನಿಯ ಪ್ರದೇಶದ ಜನರಲ್ಲಿ ವರ್ಜಿನಿಯಾದಿಂದ ಬೇರೆಯಾಗುವ ಆಸೆ ಬೆಳೆಯಿತು. 1863ರ ಜೂನ್ 19ರಂದು ಪಶ್ಚಿಮ ವರ್ಜಿನಿಯಾ ರಾಜ್ಯ ಸಂಯುಕ್ತ ಸಂಸ್ಥಾನಗಳ 35ನೇ ರಾಜ್ಯವಾಗಿ ಅಸ್ತಿತ್ವಕ್ಕೆ ಬಂತು. 1870ರಲ್ಲಿ ರಾಜಧಾನಿಯನ್ನು ಹೀಲಿಂಗ್ ನಿಂದ ಚಾಲ್ರ್ಸ್‍ಟನ್ನಿಗೆ ಸ್ಥಳಾಂತರಿಸಲಾಗಿತ್ತು. ಆದರೆ 1875ರಲ್ಲಿ ಮತ್ತೆ ಹೀಲಿಂಗ್ ರಾಜಧಾನಿಯಾಯಿತು. ಹತ್ತು ವರ್ಷಗಳ ಅನಂತರ ರಾಜಧಾನಿಯನ್ನು ಮತ್ತೆ ಚಾಲ್ರ್ಸ್‍ಟನ್ನಿಗೆ ವರ್ಗಾಯಿಸಲಾಯಿತು. 

ಖನಿಜ ಸಂಪತ್ತು : ಪಶ್ಚಿಮ ವರ್ಜಿನಿಯದಲ್ಲಿ ನೈಸರ್ಗಿಕ ಸಂಪತ್ತು ಯಥೇಚ್ಛವಾಗಿಯೂ, ವೈವಿಧ್ಯಮಯವಾಗಿಯೂ ಇದೆ. ಒಟ್ಟು ಖನಿಜ ಉತ್ಪಾದನೆಯ ಸೇ.94 ಕಲ್ಲಿದ್ದಲು. ಉಕ್ಕು, ರಾಸಾಯನಿಕ ಮತ್ತು ವಿದ್ಯುತ್ ಸಲಕರಣೆಗಳ ಕೈಗಾರಿಕೆಗೆ ಹೆಚ್ಚಾಗಿ ಕಲ್ಲಿದ್ದಲ್ಲನ್ನು ಬಳಸಲಾಗುತ್ತಿದೆ. ಮಿಸಿಸಿಪಿಯ ಪೂರ್ವಕ್ಕಿರುವ ಯಾವುದೇ ರಾಜ್ಯಕ್ಕಿಂತ ಹೆಚ್ಚು ನೈಸರ್ಗಿಕ ಅನಿಲವನ್ನು ಪಶ್ಚಿಮ ವರ್ಜಿನಿಯ ಉತ್ಪಾದಿಸಿ ಮಾರಾಟ ಮಾಡುತ್ತದೆ. ನೈಸರ್ಗಿಕ ಅನಿಲದ ಉತ್ಪಾದನೆ ಪಶ್ಚಿಮ ಮಧ್ಯಪ್ರದೇಶದಲ್ಲಿ ಹೆಚ್ಚು. ಪೆಟ್ರೋಲಿಯಂ, ಉಪ್ಪು, ಕಲ್ಲು ಮತ್ತು ಸುಣ್ಣ ಇವು ಇಲ್ಲಿ ಗಮನಾರ್ಹವಾಗಿ ದೊರೆಯುವ ಇತರ ಖನಿಜಗಳು. ರಾಜ್ಯದ ಪೂರ್ವದಲ್ಲಿ ಸುಣ್ಣದ ಕಲ್ಲಿನ ಅಮಿತ ದಾಸ್ತಾನಿದೆ. ಜೇಡಿಮಣ್ಣು ಇನ್ನೊಂದು ಮುಖ್ಯ ಖನಿಜ. ವಾಯವ್ಯದಲ್ಲಿ ಕಲ್ಲುಪ್ಪಿನ ಸ್ತರಗಳಿವೆ. ನೈಋತ್ಯದಲ್ಲಿ ನೀರುಪ್ಪಿನ ನಿಕ್ಷೇಪಗಳಿವೆ. ನೈಸರ್ಗಿಕ ಸಂಪತ್ತಿನ ಅಭಿವೃದ್ಧಿಯಿಂದ ಕೈಗಾರಿಕೆಗಳಿಗೆ ಉತ್ತೇಜನ ದೊರೆಕಿದೆ. 
ಕೃಷಿ : ಗುಡ್ಡಗಾಡಿನಲ್ಲಿ ಕೃಷಿಗೆ ಹೆಚ್ಚಿನ ಅನುಕೂಲತೆಗಳಿಲ್ಲ. ಕೋಳಿ ಸಾಕಣೆ, ಹೈನುಗಾರಿಕೆ, ದನಕರುಗಳ ಹಾಗೂ ಕುರಿಗಳ ಸಾಕಣೆ ಮುಖ್ಯ ಕಸುಬುಗಳು. ಸೇಬು ಮತ್ತು ಪೀಚ್ ಹಣ್ಣುಗಳ ಉತ್ಪಾದನೆಯೂ ಲಾಭದಾಯಕವಾಗಿದೆ. 
ಕೈಗಾರಿಕೆ : ರಾಸಾಯನಿಕ ಕೃತಕ ನಾರು ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳು ಮಹತ್ವ ಪಡೆದಿವೆ. ವಿದ್ಯುತ್ ವಿಪುಲವಾಗಿ ದೊರೆಯುವ ಒಹೈಯೋ ಮತ್ತು ಕನಾವ ನದಿಗಳ ಕಣಿವೆಗಳಲ್ಲಿ ಕಾರ್ಖಾನೆಗಳು ವಿಶೇಷವಾಗಿವೆ. ಉಕ್ಕು, ಗಾಜು ಮತ್ತು ಮಣ್ಣಿನ ಪಾತ್ರೆಗಳು ಹೆಚ್ಚಾಗಿ ತಯಾರಾಗುತ್ತವೆ. 

ಜನ : ಪಶ್ಚಿಮ ವರ್ಜಿನಿಯದ ನಿವಾಸಿಗಳಲ್ಲಿ ಸೇ. 98ರಷ್ಟು ಜನ ರಾಜ್ಯದಲ್ಲೇ ಜನಿಸಿದವರು. ಅವರಲ್ಲಿ ಇಂಗ್ಲೀಷ್ ಮೂಲದವರು ಅಧಿಕ. ಆದರೆ ಪೂರ್ವ ಮತ್ತು ಉತ್ತರ ಪ್ರದೇಶಗಳಲ್ಲಿ ಜರ್ಮನ್ ಮೂಲದವರೂ, ದಕ್ಷಿಣ ಭಾಗದಲ್ಲಿ ಸ್ಕಾಚ್-ಐರಿಷ್ ಮೂಲದವರೂ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ರಾಜ್ಯದ ಉತ್ತರ ಭಾಗದಲ್ಲಿ ನ್ಯೂಯಾರ್ಕ್, ಪೆನ್ಸಿಲ್ವೇನಿಯ ಹಾಗೂ ಮೇರಿಲ್ಯಾಂಡ್‍ಗಳಿಂದ ಬಂದವರೂ ದಕ್ಷಿಣದಲ್ಲಿ ಉತ್ತರ ಕ್ಯರೊಲೀನದಿಂದ ತರಲಾದ ನೀಗ್ರೋಗಳು, ಮೂಲ ವರ್ಜಿನಿಯರೂ ವಿಶೇಷವಾಗಿದ್ದಾರೆ. ರಾಜ್ಯದಲ್ಲಿ ಹೆಚ್ಚು ಜನರು ಮೆತಾಡಿಸ್ಟರು, ಮತ್ತು ಬ್ಯಾಪ್ಟಿಸ್ಟರು. ಉತ್ತರದಲ್ಲಿ ಮತ್ತು ವಿಶೇಷವಾಗಿ ಹೀಲಿಂಗ್ ನಗರದಲ್ಲಿ ರೋಮನ್ ಕ್ಯಾಥೊಲಿಕರು, ಕನಾವ ಕಣಿವೆಯಲ್ಲಿ ಪ್ರೆಸ್ಟಿಟೇರಿಯನರೂ ಗಮನಾರ್ಹಸಂಖ್ಯೆಯಲ್ಲಿದ್ದಾರೆ. 

ಸಾರಿಗೆ : ರಾಜ್ಯದ ದೊಡ್ಡ ನಗರಗಳಲ್ಲಿ ಮತ್ತು ಅವುಗಳ ಸುತ್ತಣ ಪ್ರದೇಶಗಳಲ್ಲಿ ಸಾರಿಗೆ ಸೌಲಭ್ಯ ತೃಪ್ತಿಕರವಾಗಿದೆ. ಗುಡ್ಡಗಾಡಿನ ಪ್ರದೇಶದಲ್ಲಿ ಹಾಗೂ ವಿರಳ ಜನಸಂಖ್ಯೆ ಇರುವೆಡೆಗಳಲ್ಲಿ ಸೌಲಭ್ಯ ಕಡಿಮೆ. ರಾಜ್ಯದಲ್ಲಿರುವ ಹೆದ್ದಾರಿಗಳ ಉದ್ದ 57, 600 ಕಿಮೀ. ರೈಲು ಮಾರ್ಗಗಳ ಉದ್ದ 5,600 ಕಿಮೀ. ಪಶ್ಚಿಮದ ತಪ್ಪಲು ಪ್ರದೇಶದಲ್ಲಿ 568 ಕಿಮೀ ಜಲಮಾರ್ಗಗಳಿವೆ. ಒಹೈಯೋ ನದಿಯ ದೊಡ್ಡ ಬಂದರು ಹಂಟಿಂಗ್ಟನ್. ರಾಜ್ಯದಲ್ಲಿ 5 ವಾಣಿಜ್ಯ ವಿಮಾನ ಸಂಸ್ಥೆಗಳು 10 ಮುಖ್ಯನಗರಗಳಿಗೆ ವಿಮಾನ ಸಂಪರ್ಕವನ್ನು ಕಲ್ಪಿಸಿವೆ. 

ಆಡಳಿತ : 1872ರಲ್ಲಿ ಜಾರಿಗೆ ಬಂದ ಸಂವಿಧಾನಕ್ಕೆ ಅನೇಕ ತಿದ್ದುಪಡಿಗಳಾಗಿವೆ. ಕಾರ್ಯಾಂಗದ ಪ್ರಾಧಿಕಾರಿಯಾದ ಗವರ್ನರನ ನೇತೃತ್ವದಲ್ಲಿ ಚುನಾಯಿತ ರಾಜ್ಯಸಚಿವ, ಲೆಕ್ಕ ಪರೀಕ್ಷಕ, ಕೋಶಾಧ್ಯಕ್ಷ, ಅಟಾರ್ನಿ ಜನರಲ್, ಕೃಷಿ ಕಮಿಷನರ್ ಮೊದಲಾದ ಸಹಾಯಕ ಅಧಿಕಾರಿಗಳಿದ್ದಾರೆ. ವಿಧಾನ ಮಂಡಲದಲ್ಲಿ ಸೆನೆಟ್ ಮತ್ತು ಪ್ರತಿನಿಧಿಗಳ ಸಭೆ ಎಂಬ ಎರಡು ಸದನಗಳಿವೆ. ಸೆನೆಟಿನ ಸದಸ್ಯರ ಸಂಖ್ಯೆ 34. ಅವರ ಅಧಿಕಾರದ ಅವಧಿ 4 ವರ್ಷ. ರಾಜ್ಯ ಪ್ರತಿನಿಧಿಗಳು ನೂರು ಮಂದಿ. ಇವರ ಕಾಲಾವಧಿ 2 ವರ್ಷಗಳು.

12 ವರ್ಷಗಳ ಅವಧಿಗೆ ಚುನಾಯಿತರಾಗುವ 5 ನ್ಯಾಯಾಧೀಶರಿರುವ ಅಪೀಲುಗಳ ಸರ್ವೋಚ್ಛನ್ಯಾಯಾಲಯವಿದೆ. 31 ಸಂಚಾರಿ ನ್ಯಾಯಾಲಯಗಳು ದೊಡ್ಡ ಪ್ರಕರಣಗಳಲ್ಲಿ ಹೆಚ್ಚು ಭಾಗವನ್ನು ನಿರ್ವಹಿಸುತ್ತವೆ. ಅಲ್ಲದೆ 14 ವಿಶೇಷ ನ್ಯಾಯಾಲಯಗಳಿವೆ. 

ಶಿಕ್ಷಣ : ರಾಜ್ಯ ಶಿಕ್ಷಣ ಮಂಡಳಿ ಸಾರ್ವಜನಿಕ ಶಾಲಾ ವ್ಯವಸ್ಥೆಯನ್ನು ನಿರ್ದೇಶಿಸುತ್ತದೆ. ಮಾರ್ಗನ್ ಟೌನಿನಲ್ಲಿ ಪಶ್ಚಿಮ ವರ್ಜಿನಿಯ ವಿಶ್ವವಿದ್ಯಾಲಯ ಮತ್ತು ಹಂಟಿಂಗ್ಟನ್ನಿನಲ್ಲಿ ಮಾರ್ಷಲ್ ವಿಶ್ವವಿದ್ಯಾಲಯ ಇವೆ. ಅನೇಕ ಜ್ಯೂನಿಯರ್ ಕಾಲೇಜುಗಳೂ ಅನೇಕ ಶಿಕ್ಷಕ ತರಭೇತಿ ಮತ್ತು ವಿಶೇಷ ತಾಂತ್ರಿಕ ಶಿಕ್ಷಣ ಸಂಸ್ಥೆಗಳೂ ಹಲವಾರು ಖಾಸಗಿ ಮತ್ತು ಪಂಥೀಯ ಕಾಲೇಜುಗಳು ಇವೆ. ಗ್ರೀನ್ ಬ್ಯಾಂಕ್‍ನಲ್ಲಿ ರಾಷ್ಟ್ರೀಯ ರೇಡಿಯೋ ಖಗೋಳ ವಿಜ್ಞಾನ ವೀಕ್ಷಣಾಲಯವಿದೆ.				(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ